ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳೊ ಚಿಕ್ಕಮಗಳೂರಿನಲ್ಲಿ ಕಳೆದೊಂದು ವಾರದಿಂದ ಧರ್ಮ ಸಂಘರ್ಷ ಜೋರಾಗಿದೆ. ವಿವಾದದ ಮೇಲೆ ವಿವಾದ ಆಗ್ತಿದೆ. ಮೊದಲು ಮಾಂಸದೂಟ, ಬಳಿಗ ಗೋರಿ ಪೂಜೆ ಈಗ ದತ್ತಪೀಠದ ಆವರಣ ಮತ್ತು ಗುಹೆಯ ಒಳಗೂ ನಮಾಜ್ ಮಾಡಿದ ಆರೋಪ ಬಂದಿದೆ. ಜಿಲ್ಲಾಡಳಿತದಿಂದ ನೇಮಿಸಲ್ಪಟ್ಟ ಮುಜಾವರ್‍ರಿಂದ ಮಾತ್ರ ದತ್ತ ಪಾದುಕೆ, ಗೋರಿಗಳಿಗೆ ಪೂಜೆಗೆ ಅವಕಾಶ ಇದೆ. ಆದರೆ ಕೋರ್ಟ್ ಆದೇಶವನ್ನ ಗಾಳಿಗೆ ತೂರಿ ನಮಾಜ್ ಮಾಡಲಾಗಿದೆ. ಕೋರ್ಟ್ ಆದೇಶದ ಅನ್ವಯ ಆವರಣ ಸೇರಿ ಗುಹೆ ಒಳಗೆ ಪ್ರಾರ್ಥನೆ, ನಮಾಜ್, ಪೂಜೆ ಸಲ್ಲಿಸಲು ಅವಕಾಶವಿಲ್ಲ. ದತ್ತಭಕ್ತರು ಸೇರಿದಂತೆ ಯಾರಿಗೂ ಯಾವುದೇ ಪೂಜೆ ಪುನಸ್ಕಾರಕ್ಕೆ ಅವಕಾಶವಿಲ್ಲ. ಸದ್ಯ ನಮಾಜ್ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇದು ಹಿಂದೂ ಸಂಘಟನೆಗಳ ಕಣ್ಣು ಕೆಂಪಾಗಿಸಿದೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿ ಕೆ.ಎನ್ ರಮೇಶ್, ಎಲ್ಲಾ ಧರ್ಮದವರಿಗೂ ಪ್ರಾರ್ಥನೆ ಮಾಡಲು ಹಾಲ್ ಇದೆ. ಅಲ್ಲೇ ಮಾಡಬೇಕು. ಈಗಿನ ವೈರಲ್ ವಿಡಿಯೋವನ್ನ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುತ್ತೇವೆ ಎಂದಿದ್ದಾರೆ. ಗರ್ಭಗುಡಿ, ಪೂಜೆ ಹಾಗೂ ಉಮೇದುವಾರಿಕೆ ವಿಷಯ ಮಾತ್ರ ಕೋರ್ಟ್ ಮುಂದಿರೋ ವಿವಾದ, ಈಗಿನ ನಮಾಜ್ ವಿಡಿಯೋ ನಿಷೇಧಿತ ಪ್ರದೇಶದ ಒಳಗೆ ಬರೋದಿಲ್ಲ, ಈ ಜಾಗ ದೂರ ಇದೆ ಎಂದಿದ್ದಾರೆ.
#NewsCafe #PublicTV #DattaPeeta #Namaz